ಸೌತ್ರಾಂತಿಕರು
	ಬೌದ್ಧಪಂಥದ ಮತ ಪ್ರಭೇದಗಳಲ್ಲೊಂದು. ಇವರು ತಮ್ಮನ್ನು ಸರ್ವಾಸ್ತಿವಾದಿಗಳೆಂದು ಎಲ್ಲಿಯೂ ಕರೆದುಕೊಂಡಿಲ್ಲ. ಕಲ್ಪನಾಮಂಡತಿಕಾದೃಷ್ಟಾಂತಪಂಕ್ತಿ ಎಂಬ ಅವದಾನ ಕಥೆಗಳ ಸಂಗ್ರಹವನ್ನು ಸಿದ್ಧಪಡಿಸಿದ ತಕ್ಷಶಿಲೆಯ ಕುಮಾರಲಾತ (ಕುಮಾರಲಬ್ಧ) ಎಂಬುವವನು ಈ ಮತದ ಪ್ರವರ್ತಕನೆಂದು ಚೀನಿಯಾತ್ರಿಕ ಯುವಾನ್‍ಚಾಂಗ್ ಉಲ್ಲೇಖಿಸಿದ್ದಾನೆ. ಕುಮಾರಲಾತನ ಶಿಷ್ಯ ಹರಿವರ್ಮನೆಂಬುವನು ವಸುಬಂಧುವಿನ ಸಮಸಾಮಯಿಕನೆಂದು ತಿಳಿಯುತ್ತದೆ. ಇದರಿಂದ ಕುಮಾರಲಾತನ ಕಾಲ 3ನೆಯ ಶತಮಾನದ ಅಂತ್ಯಭಾಗಕ್ಕಿಂತ ಮೊದಲು ಇರಲಾರದು. ಆದರೆ ಕುಮಾರಲಾತನ ಹೆಸರಿನಲ್ಲಿರುವ ಮಂಡತಿಕಾ ದೃಷ್ಯಾಂತ ಪಂಕ್ತಿ ಗ್ರಂಥದಲ್ಲಿ ಸೌತ್ರಾಂತಿಕ ಮತದ ವಿವರಗಳು ದೊರೆಯುವುದಿಲ್ಲ. ಈ ಗ್ರಂಥದ ಆರಂಭದಲ್ಲಿ ಸರ್ವಾಸ್ತಿವಾದದ ಆಚಾರ್ಯರನ್ನು ಗೌರವದಿಂದ ಉಲ್ಲೇಖಿಸಿರುವುದು ಸ್ವಾರಸ್ಯವಾಗಿದೆ. ಸೌತ್ರಾಂತಿಕರಿಗೆ ಗಂಡವ್ಯೂಹಸೂತ್ರವೆಂಬುದೂ ಪ್ರಮಾಣಗ್ರಂಥವಿದ್ದಂತೆ. ಆದರೆ ಸೌತ್ರಾಂತಿಕ ಪ್ರಮೇಯಗಳನ್ನು ನಿರೂಪಿಸುವ ಗ್ರಂಥ ಯಾವುದೂ ಈವರೆಗೆ ಉಪಲಬ್ಧವಿಲ್ಲ. ಹರಿವರ್ಮ ಬರೆದ ಸತ್ಯಸಿದ್ಧಿಶಾಸ್ತ್ರ ಮಾತ್ರ ಉಳಿದು ಬಂದಿದೆ. ಈ ಹರಿವರ್ಮ ಸೌತ್ರಾಂತಿಕ ದೀಕ್ಷೆಯವನೆಂದು ಹೇಳಿರುವರಾದರೂ ಈ ಅಭಿಪ್ರಾಯಕ್ಕೆ ಇವನ ಗ್ರಂಥದಲ್ಲಿ ಯಾವುದೇ ಮಾಹಿತಿ ದೊರೆಯುವುದಿಲ್ಲ. ಆದರೆ ಈ ಮತದ ಹಲವು ಪ್ರಮೇಯಗಳ ಪ್ರಸ್ತಾಪ ಪ್ರಾಸಂಗಿಕವಾಗಿ ಬಂದಿದೆ. ಇವುಗಳಿಂದ ಸೌತ್ರಾಂತಿಕಮತದ ಸಮಗ್ರ ಮಾಹಿತಿ ದೊರೆಯುವುದಿಲ್ಲ. 

	ವೈಭಾಷಿಕರು ಅಭಿಧರ್ಮವನ್ನೇ ಹಿಡಿದು ಮತವನ್ನು ರೂಪಿಸಿಕೊಂ ಡಂತೆ ಸೌತ್ರಾಂತಿಕರೂ ಸೂತ್ರಪಿಟಕವನ್ನೇ ಅವಲಂಬಿಸಿದ್ದರಿಂದ ಇವರಿಗೆ ಈ ಹೆಸರು ಬಂದಿತೆನ್ನಲಾಗಿದೆ. ಇವರಿಗೆ ವಿನಯಪಿಟಕ ಮತ್ತು ಅಭಿಧರ್ಮಪಿಟಕಗಳು ಅಷ್ಟೊಂದು ಉಪಾಧೇಯವಲ್ಲ. ವೈಭಾಷಿಕರಂತೆ ಇವರೂ ಪಂಚಸ್ಕಂಧಗಳು, ದ್ವಾದಶಾಯತನಗಳು, ಆಯತನ-ವಿಜ್ಞಾನ ಸಂಯೋಗದಿಂದಾದ ಅಷ್ಟಾದಶಧಾತುಗಳನ್ನು ಅಂಗೀಕರಿಸುತ್ತಾರೆ. ಆದರೆ ವೈಭಾಷಿಕರು ಎಲ್ಲವನ್ನೂ ದ್ರವ್ಯಸತ್ತವೆಂದರೆ, ಸೌತ್ರಾಂತಿಕರು ಸ್ಕಂಧಗಳನ್ನೂ ಆಯತನಗಳನ್ನೂ ಪ್ರಜ್ಞಪ್ತಿಸತ್ತ ಎಂದು ನಿರ್ದೇಶಿಸಿ ಧಾತುಗಳನ್ನು ಮಾತ್ರ ದ್ರವ್ಯಸತ್ತ ಎಂದು ವ್ಯವಹರಿಸುತ್ತಾರೆ. ವೈಭಾಷಿಕರು ಆಕಾಶವನ್ನು ವಸ್ತುವೆಂದು ಪರಿಗಣಿಸಿದರೆ ಇವರು ಆಕಾಶ ಬೇರೆ, ಆಕಾಶಧಾತು ಬೇರೆ ಎಂದು ಗ್ರಹಿಸುತ್ತಾರೆ. ಸೌತ್ರಾಂತಿಕರು ಬಾಹ್ಯಪ್ರಪಂಚ ಇದೆ ಎಂದು ಒಪ್ಪಿಕೊಂಡರೂ ಅದು ಅನುಮಾನಸಿದ್ಧವಾದುದು, ಪ್ರತ್ಯಕ್ಷ ಸಿದ್ಧವಾದುದಲ್ಲ. ಪ್ರತ್ಯಕ್ಷದಲ್ಲಿ ಬಾಹ್ಯವಸ್ತುಗಳು ಪರಿಕಲ್ಪಿತ ಬಿಂಬಗಳಾಗಿ ಮಾತ್ರ ಇರುತ್ತವೆ; ಪ್ರತ್ಯಕ್ಷವೆಂಬ ವ್ಯಾಪಾರದಲ್ಲಿ ಇಂದ್ರಿಯ-ರೂಪಗಳ ಸಂಬಂಧದಿಂದ ವಿಜ್ಞಾನ ಉಂಟಾಗಿ ವಿಷಯಗ್ರಹಣ ಪರೋಕ್ಷವಾಗಿ ಆಗುತ್ತದೆ. ಎಂಬುದು ಸೌತ್ರಾಂತಿಕರ ನಿಲುವು (ಪ್ರತ್ಯಕ್ಷೋ ನ ಹಿ ಬಾಹ್ಯವಸ್ತುವಿಸ್ತರ).

	ಇವರು ವೈಭಾಷಿಕರಂತೆಯೇ ಸ್ವಭಾವವಾದಿಗಳು. ಆದರೆ ಸರ್ವಾಸ್ತಿವಾದಿಗಳು ಹೇಳುವಂತೆ ಒಂದೇ ಕ್ಷಣದಲ್ಲಿ ಸ್ವಭಾವಸಿದ್ಧವಾದ ಜನ್ಮ, ಸ್ಥಿತಿ, ಉಪಚಯ, ಭಂಗ ಎಂಬ ಚತುರ್ಲಕ್ಷಣಗಳು ಒಂದಾಗಿವೆ ಎಂಬುದನ್ನು ಇವರು ಒಪ್ಪುವುದಿಲ್ಲ. ಈ ನಾಲ್ಕು ಲಕ್ಷಣಗಳೂ ಜೀವನದ ಅವಧಿಯಲ್ಲಿ ಒಂದಾದಮೇಲೊಂದು ಕಾಣಿಸಿಕೊಳ್ಳುತ್ತವೆ. ಉತ್ಪತ್ತಿ ಅಥವಾ ಹುಟ್ಟು ಎಂದರೆ ಪ್ರವಾಹವೊಂದು ಆರಂಭವಾಯಿತೆಂದೂ ಭಂಗ ಅಥವಾ ಸಾವು ಎಂದರೆ ಅದು ಮುಗಿಯಿತೆಂದೂ ಅರ್ಥ. ಆದ್ದರಿಂದ ಜನ್ಮದ ಅನಂತರ ಲಕ್ಷಣಗಳಿಗೆ ದ್ರವ್ಯಸತ್ತ ಎನ್ನುವುದು ಸಲ್ಲದು. ಸರ್ವಾಸ್ತಿವಾದಿಯ ಸಮಷ್ಟಿವಾದವನ್ನು ನಿರಾಕರಿಸಿ ಇವರು ಸಂತತಿವಾದವನ್ನು ಪ್ರತಿಪಾದಿಸಿದರು. ಸೌತ್ರಾಂತಿಕಮತದ ಪ್ರಮೇಯಗಳೇ ಮುಂದೆ ಮಹಾಯಾನ ಪಂಥದ ವಿವರಗಳನ್ನು ರೂಪುಗೊಳಿಸಿದವೆಂದು ಹೇಳಲಾಗುತ್ತದೆ. 	
									
	(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ